ಬುಧವಾರ, ನವೆಂಬರ್ 18, 2009

ವಿಶ್ವ ಮಾನವ ಸಂದೇಶ

ಕುವೆಂಪುರವರ ವಿಶ್ವಮಾನವ ಸಂದೇಶ

ಪ0ಚಮಂತ್ರ ಮತ್ತು ಸಪ್ತಸೂತ್ರ

``ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು

ಶ್ರದ್ಧೆ ಸ0ದೇಹಗಳನಿರದೆ ಹೊಡೆದೆಬ್ಬಿಸುವ,

ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷಂಗಳಂ

ಕೆರಳಿಸುವ ಶತಶತ ಮತಂಗಳಂ ತಾಮಲ್ಲಿ

ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್,

ಜೋಲ್ವ ಜಿಹ್ವೆಯೊಳತಿ ಭಯಾನಕಂ-!''

ಅಭಿಷೇಕ ವಿರಾಟ್ ದರ್ಶನ0 - 147-152

ಶ್ರೀರಾಮಾಯಣದರ್ಶನ0, ಶ್ರೀ ಸ0ಪುಟ. ಸ0.13

ಪ್ರತಿಯೊ0ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು `ವಿಶ್ವಮಾನವ'ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ `ವಿಶ್ವಮಾನವ'ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ0ಗ, ವರ್ಣ ಇತ್ಯಾದಿ ಉಪಾಧಿಗಳಿ0ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ0ದ ಪಾರಾಗಿ ಅವನನ್ನು `ಬುದ್ಧ'ನನ್ನಾಗಿ, ಅ0ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ0ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ0ಚದ ಮಕ್ಕಳೆಲ್ಲ `ಅನಿಕೇತನ'ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ0ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ0ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ0ಬ ಉದ್ದೇಶದಿ0ದ ಹುಟ್ಟಿಕೊ0ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ0ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ0ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ0ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು0ಪುಗು0ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ0ಬ0ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ0ದೆ ಹೇಳಿದ0ತೆ `ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ

ಈ ಪ0ಚಮ0ತ್ರ ಇನ್ನು ಮು0ದಿನ ದೃಷ್ಟಿಯಾಗಬೇಕಾಗಿದೆ. ಅ0ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ0ಶಿಕ ದೃಷ್ಟಿಯಿ0ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ0ತಹ ಭಾವನೆ ಅ0ತಹ ದೃಷ್ಟಿ ಬರಿಯ ಯಾವುದೋ ಒ0ದು ಜಾತಿಗೆ, ಮತಕ್ಕೆ, ಗು0ಪಿಗೆ, ಒ0ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು0ಪುಗಾರಿಕೆಗೆ0ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ0ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ0ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ `ದರ್ಶನ'ವನ್ನೆ `ವಿಶ್ವಮಾನವ ಗೀತೆ' ಸಾರುತ್ತದೆ.

ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ:

ಸಪ್ತಸೂತ್ರ

1. ``ಮನುಷ್ಯಜಾತಿ ತಾನೊ0ದೆ ವಲ0'' ಎ0ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.

2. ವರ್ಣಾಶ್ರಮವನ್ನು ತುದ್ದುವುದಲ್ಲ, ಅದನ್ನು ಸ0ಪೂರ್ಣವಾಗಿ ತೊಲಗಿಸಬೇಕು. ಅ0ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ0ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ0ಟ್, ಸಿಕ್, ನಿರ0ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.

3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ0ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.

4. `ಮತ' ತೊಲಗಿ `ಅಧ್ಯಾತ್ಮ' ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.

5. ಮತ `ಮನುಜಮತ'ವಾಗಬೇಕು; ಪಥ `ವಿಶ್ವಪಥ'ವಾಗಬೇಕು; ಮನುಷ್ಯ `ವಿಶ್ವಮಾನವ'ನಾಗಬೇಕು.

6. ಮತ ಗು0ಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ0ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ0ಡುಕೊಳ್ಳುವ `ತನ್ನ' ಮತಕ್ಕೆ ಮಾತ್ರ ಸೇರಬೇಕು. ಅ0ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ0ಖ್ಯೆಯ ಮತಗಳಿರುವ0ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು0ಪುಕಟ್ಟಿ ಜಗಳ ಹಚ್ಚುವ0ತಾಗಬಾರದು.

7. ಯಾವ ಒ0ದು ಗ್ರ0ಥವೂ `ಏಕೈಕ ಪರಮ ಪೂಜ್ಯ' ಧರ್ಮಗ್ರ0ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ `ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು

ವಿಶ್ವಮಾನವಗೀತೆ “ಅನಿಕೇತನ”

ಓ ನನ್ನ ಚೇತನ,

ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,

ನಾಮಕೋಟಿಗಳನು ಮೀಟಿ,

ಎದೆಯ ಬಿರಿಯೆ ಭಾವದೀಟಿ,

ಓ ನನ್ನ ಚೇತನ,

ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,

ಎಲ್ಲ ತತ್ತ್ವದೆಲ್ಲೆ ಮೀರಿ,

ನಿರ್ದಿಗನ0ತವಾಗಿ ಏರಿ,

ಓ ನನ್ನ ಚೇತನ,

ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;

ಮನೆಯನೆ0ದೂ ಕಟ್ಟದಿರು;

ಕೊನೆಯನೆ0ದೂ ಮುಟ್ಟದಿರು;

ಓ ಅನ0ತವಾಗಿರು!

ಓ ನನ್ನ ಚೇತನ,

ಆಗು ನೀ ಅನಿಕೇತನ!

ಅನ0ತ ತಾನ್ ಅನ0ತವಾಗಿ

ಆಗುತಿಹನೆ ನಿತ್ಯಯೋಗಿ;

ಅನ0ತ ನೀ ಅನ0ತವಾಗು;

ಆಗು, ಆಗು, ಆಗು, ಆಗು,

ಓ ನನ್ನ ಚೇತನ,

ಆಗು ನೀ ಅನಿಕೇತನ!



ಬುಧವಾರ, ಅಕ್ಟೋಬರ್ 21, 2009

ನಮ್ಮ ನಾಡು ಕರ್ನಾಟಕ


ನಮ್ಮ ನಾಡು ಕರ್ನಾಟಕ


1956 ರ ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯಕ್ಕೆ ಇದೀಗ 53ರ ಸಂಭ್ರಮ. ಐದು ದಶಕಗಳ ಹಿಂದೆ ನೆರೆಯ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕರುನಾಡು ಕನ್ನಡಿಗರ ಕೆಚ್ಚೆದೆಯ ಹೋರಾಟದ ಪ್ರತಿಫಲವಾಗಿ ಏಕೀಕರಣಗೊಂಡಿತು. …ಭಾರತವು ಸ್ವಾತಂತ್ರ್ಯ ಪಡೆದ ಮೇಲೂ ಭಾಷಾವಾರು ರಾಜ್ಯಗಳನ್ನು ರಚಿಸಲು ಸಿದ್ಧವಿಲ್ಲದ ನೆಹರೂ ಸರ್ಕಾರವನ್ನು ಕನ್ನಡಿಗರು ತೀವ್ರ ಸತ್ಯಾಗ್ರಹ ಚಳುವಳಿಯ ಮೂಲಕವೇ ಮಣಿಸುವ ಮೂಲಕವೇ 1965 ರಲ್ಲಿ ಮೈಸೂರು ರಾಜ್ಯವು ಸ್ಥಾಪನೆಯಾಯಿತು. ಕರ್ನಾಟಕವು ಅಧಿಕೃತವಾಗಿ 53 ವರ್ಷಗಳ ಹಿಂದೆ ಸ್ಥಾಪನೆಯಾದರೂ ಕರ್ನಾಟಕ ಭೂಪ್ರದೇಶಕ್ಕೆ ತನ್ನದೇ ಆದ ಸಾವಿರಾರು ವರ್ಷಗಳ ಇತಿಹಾಸವಿದೆ.


ಕನ್ನಡ ನಾಡಿನ ಚರಿತ್ರೆಯ ಕಿರು ನೋಟ


· ಕರ್ನಟಕ ಭೂಪ್ರದೇಶದಲ್ಲಿ 40 ಸಾವಿರ ವರ್ಷಗಳ ಹಿಂದೆ ಹಳೆಯ ಶಿಲಾಯುಗದ ಕಾಲದಿಂದಲೂ ಜನಜೀವನ ಆರಂಭವಾಗಿತ್ತು.


· 3000 ವರ್ಷಗಳ ಹಿಂದಿನ ಹರಪ್ಪಾ ನಗರೀಕತೆಯ ಜನರೊಂದಿಗೆ ಕರ್ನಟಕ ವಾಸಿಗಳಿಗೆ ಸಂಬಂಧವಿತ್ತು.


· ಮೌರ್ಯ ಸಾಮ್ರಾಜ್ಯದ ಯುಗದಲ್ಲಿ ಕರ್ನಾಟಕವು ರಾಜಧಿಪತ್ಯಕ್ಕೆ ಒಳಗಾಯಿತು.


· ಕ್ರಿ.ಪೂ.240ರಲ್ಲಿ ಶಾತವಾಹನರ ಕಾಲದಲ್ಲಿ ಇಲ್ಲಿನ ಬುಡಕಟ್ಟು, ಜಾತಿ ವ್ಯವಸ್ಥೆಯು ವರ್ಣಾಶ್ರಮದ ಚೌಕಟ್ಟಿನೊಳಗೆ ಸೇರಿಕೊಂಡಿತು.


· ನಂತರದಲ್ಲಿ ಕದಂಬರು, ಗಂಗರು, ಬಾದಾಮಿಯ ಚಾಳುಕ್ಯರು, ರಾಷ್ಟ್ರಕೂಟರು,ಕಲ್ಯಾಣದ ಚಾಲುಕ್ಯರು, ಕಳಚೂರಿಗಳು, ಹೊಯ್ಸಳರು, ವಿಜಯನಗರ, ಬಹುಮನಿ, ಹಾಗೂ ಮೈಸೂರಿನ ಒಡೆಯರ ಆಳ್ವಿಕೆಗಳಿಗೆ ಒಳಪಟ್ಟಿದೆ.


· ಪ್ರಮುಖ ದ್ರಾವಿಡಭಾಷೆಯಾದ ಕನ್ನಡವು ಸಂಸ್ಕøತದ ಪ್ರಭಾವಕ್ಕೆ ಒಳಗಾತಿತಲ್ಲದೆ ಸಂಸ್ಕøತದೊಂದಿಗೆ ತೀವ್ರ ಸಂಘರ್ಷವನ್ನೂ ನಡೆಸಿತು.


· ಕ್ರಿ. ಶ.12ನೇ ಶತಮಾನದಲ್ಲಿ ನಡೆದ ವಚನ ಚಳುವಳಿಯು ಊಳಿಗಮನ್ಯತೆಯ ವಿರುದ್ಧ ಗಟ್ಟಿ ದನಿಯಗಿತ್ತು. ವಚನಕಾರರು ಕನ್ನಡದಲ್ಲಿ ಸಾವಿರಾರು ವಚನಗಳನ್ನು ರಚಿಸುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದರು. ಜಾತಿ ಲಿಂಗ ತಾರರಮ್ಯದ ವಿರುದ್ಧ ವಚನ ಚಳುವಳಿಯು ಧ್ವನಿಯಾಗಿತ್ತು.


· ಹೈದರ್ ಹಗೂ ಟಿಪ್ಪೂಸುಲ್ತಾನರ ಕಾಲದಲ್ಲಿ ಕರ್ನಾಟಕವು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿತು. ಭುಸುಧಾರಣೆ, ಮಧ್ಯ ನಿಷೇಧಗಳು ಜಾರಿಗೆ ಬಂದವು. ನೀರಾವರಿ ಉತ್ತಮಗೊಂಡು ಕೃಷಿ, ಕೈಗರಿಕೆಗಳು ಅಭಿವೃದ್ಧಿ ಹೊಂದಿದವು.


· 1799 ರಲ್ಲಿ ಟಿಪ್ಪೂ ಸುಲ್ತಾನನ ಮರಣದೊಂದಿಗೆ ಕರ್ನಾಟಕವು ಸಂಪೂರ್ಣವಾಗಿ ಬ್ರಿಟಿಷರ ಪಲಾಯಿತು.


· 1800 ರಿಂದ 1857ರ ವರೆಗೆ ಕರ್ನಾಟಕದಲ್ಲಿ ನೂರಾರು ವಿರೋಚಿತ ವಸಾಹತುಶಾಹಿ ವಿರೋಧಿ ದಂಗೆಗಳು ನಡೆದವು. ದೊಂಡಿಯವಾಘ, ಸಂಗೊಳ್ಳಿರಾಯಣ್ಣ, ಮೈಲಾರ ಮಹಾದೇವ, ಕಲ್ಯಾಣಸ್ವಾಮಿ, ಕಿತ್ತೂರು ಚೆನ್ನಮ್ಮ ಈ ದಂಗೆಗಳಿಗೆ ನಾಯಕತ್ವ ನೀಡಿದ ಪ್ರಮುಖರು. ನಗರದ ದಂಗೆ, ಹಲಗಲಿ ಬೇಡರ ದಂಗೆಗಳು ಬ್ರಿಟಿಷರನ್ನು ನಡುಗಿಸಿದವು.


· 1856 ರ ಸುಮಾರಿಗೇ ಕರ್ನಾಟಕ ಏಕೀಕರಣದ ಬೇಡಿಕೆಯು ಮೊಳಕೆಯೊಡೆದಿದ್ದರೂ ಅದು ತೀವ್ರತೆ ಪಡೆದುಕೊಪಂಡಿದ್ದು 1900ರ ನಂತರ. 1890ರಲ್ಲಿ ಸ್ತಾಪನೆಯಾಗಿದ್ದ ಕರ್ನಾಟಕ ವಿಧ್ಯಾವರ್ಧಕ ಸಂಘವು 1890ರಲ್ಲಿ ಅಲೂರು ವೆಂಕಟರಾಯರ ಪ್ರವೇಶವಾದ ಮೇಲೆ ಚಳುವಳಿಗೆ ಹೊಸಹುರುಪು ಬಂದಿತು. 1926 ರಲ್ಲಿ ನಡೆದ ಬೆಳಗಾವಿ ಕಾಂಗ್ರಸ್ ಅಧಿವೇಶನದಲ್ಲಿ ನಾಡಿನ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಜನರು ಏಕೀಕರಣವನ್ನು ಬೆಮಬಲಿಸಿದರು. ಇದರಲ್ಲಿಯೇ ಹುಯಿಲುಗೋಳ ನಾರಾಯಣರು ತಮ್ಮ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ಹಾಡುವ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು.


· 1948ರ ಸೆ.17 ರಂದು ಹೈದರಾಬಾದ್ ಕರ್ನಾಟಕವು ನಿಜಾಮನ ದುರಾಳ್ವಿಕೆಯಿಂದ ವಿಮೋಚನೆಗೊಂಡಿತು.


· ಮುಂದೆ 1973ರ ನವೆಂಬರ್ 1ರಂದು ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಕರ್ನಾಟಕವೆಂದರೆ ಕಪ್ಪು ಮಣ್ಣಿನ ನಡು ಎಂದರ್ಥ. (ಕರ್+ನಾಟ್+ಕ). ಇಡೀ ರಾಜ್ಯದ ಭೌಗೋಳಿಕ, ಸಾಂಸ್ಕøತಿಕ ಹಾಗೂ ಭಾಷಾ ಐಕ್ಯತೆಯನ್ನು ಕರ್ನಾಟಕವು ಪ್ರತಿಬಿಂಬಿಸುವುದರಿಂದ ಹಾಗೂ ಉತ್ತರಕರ್ನಾಟಕದ ಜನರಿಂದ ಒತ್ತಾಯವೂ ಇದ್ದುದರಿಂದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್‍ರವರು ಈ ಐತಿಹಾಸಿಕ ನಿರ್ಣಯವನ್ನು ಕೈಗೊಂಡರು.




ಕರ್ನಾಟಕದ ಸಾಧನೆಗಳು ಮತ್ತು ಸವಾಲುಗಳು.


ಸಾಂಸ್ಕøತಿಕವಾಗಿ ಅಪಾರ ಶ್ರೀಮಂತಿಕೆಯನ್ನು ಹೊಂದಿರುವ ಕರ್ನಾಟಕವು ಕಳೆದ ಐದು ದಶಕಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದೆ. 1967 ರಿಂದ ಇಲ್ಲಿಯವರೆಗೆ ಏಳು ಮಂದಿ ಕನ್ನಡಿಗರು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು. ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು  ಪಡೆದಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಕೆಲವು ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ಪ್ರಗತಿ ಸಾಧಿಸಿದೆ. ಅವುUಳಲ್ಲಿ ಬೆಂಗಳೂರುನಲ್ಲಿ ನೆಲೆ ಹೊಂದಿರುವ ಹೆಚ್.ಎ.ಎಲ್, ಬಿ.ಹಚ್.ಇ.ಎಲ್, ಬಿ.ಎ.ಎಂ.ಎಲ್, ಹೆಚ್.ಎಂ.ಟಿ, ಮುಂತಾದುವು ಪ್ರಮುಖವಾಗಿವೆ. 1980 ರಿಂದೀಚೆಗೆ ಕರ್ನಾಟಕವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲು ಇಟ್ಟಿದೆ. ಭಾರತದ ಅತಿದೊಡ್ಡ ಸಾಫ್ಟ್‍ವೇರ್ ಕಂಪನಿಗಳಾದ ಇನ್ಫೋಸಿಸ್ ಹಾಗೂ ವಿಪ್ರೋ ಗಳನ್ನೂ ಸೇರಿದಂತೆ ರಾಜ್ಯದಲ್ಲಿ 2000ಕ್ಕೂ ಹೆಚ್ಚು ಐ.ಟಿ. ಸಂಸ್ಥೇಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ರಫ್ತು ಪ್ರಮಾಣ ವಾರ್ಷಿಕ 50,000 ಕೋಟಿರೂಗಳಿಗೂ ಹೆಚ್ಚಿನ ಮೌಲ್ಯವನ್ನು ಮೀರುತ್ತದೆ. ಹಾಗೆಯೆ ಜೈವಿಕ ತಂತ್ರಜ್ಞಾನದಲ್ಲೂ ಕರ್ನಾಟಕವೇ ಅತಿ ಮುಂದಿದೆ. ದೇಶÀದ 320 ಬಿ.ಟಿ. ಕಂಪನಿಗಳಲ್ಲಿ 158 ಕಂಪನಿಗಳು ಕರ್ನಾಟಕದಲ್ಲಿವೆ. ದೇಶದ ಒಟ್ಟಾರೆ ಪುಷ್ಪೋದ್ಯಮದಲ್ಲಿ ಕರ್ನಾಟಕದ ಪಾಲು ಶೇ.75ರಷ್ಟು! ದೇಶದ 7 ಮುಂಚೂಣಿ ಬ್ಯಾಂಕುಗಳು ಕರ್ನಾಟಕದವೇ ಆಗಿವೆ. ಅವುಗಳೆÀಂದರೆ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್.


ಇವೆಲ್ಲವುಗಳೊಂದಿಗೆ ಸಾಹಿತ್ಯ, ಶಿಕ್ಷಣ, ಕ್ರೀಡೆ, ಜಾನಪದ, ಸಂಗೀತ, ನಾಟಕ, ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲೂ ಕರ್ನಾಟಕವು ಮಹತ್ತರವಾದ ಸಾಧನೆಗಳನ್ನು ಮಾಡಿದೆ.


ಇವೆಲ್ಲಾ ಸಾಧನೆಗಳ ಜೊತೆ ಜೊತೆಗೇ ಹಲವಾರು ಸವಾಲುಗಳೂ ಇಂದು ಕನ್ನಡಿಗರ ಮುಂದಿವೆ. ಪ್ರೌಢಶಾಲೆಗಳಲ್ಲಿ ಮತೃಭಾಷಾ ಶಿಕ್ಷಣಕ್ಕಾಗಿ, ಗೋಕಾಕ್ ವರದಿ ಜಾರಿಗಾಗಿ 1982 ರಲ್ಲಿ ಬುಗಿಲೆದ್ದ ಗೋಕಾಕ್ ಚಳುವಳಿಯು ಕನ್ನಡಿಗÀರ ಭಾಷಾಭಿಮಾನಕ್ಕೆ ಹಿಡಿದ ಕನ್ನಡಿಯಾಗಿತ್ತು. ಆದರೆ ಇದುವರೆಗೂ ಸರ್ಕಾರದ ಆಡಳಿತದಲ್ಲಿಯಗಲೀ, ಶಿಕ್ಷಣದಲ್ಲಿಯಾಗಲೀ ಕನ್ನಡ ಮಾತೃಭಷೆಯು ಪರಿಣಾಮಕಾರಿಯಾಗಿ ಬಳಕೆಯಾಗದಿರುವುದು ನಮ್ಮ ಆಳುವವರ, ಅಧಿಕಾರಶಾಹಿಯ ಇಚ್ಛಾಶಕಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಇಂದಿಗೂ ಲಕ್ಷಾಂತರ ವಿಧ್ಯಾರ್ಥಿಗಳ ಹಗೂ ಜನಸಾಮನ್ಯರ ಹಣೆಬರಹವನ್ನು ವಸಾಹತುಶಾಹಿ ಭಾಷೆಯಾದ ಇಂಗ್ಲಿಷ್ ಬರೆಯತ್ತಿರುವುದು ಕನ್ನಡಿಗರು ಇನ್ನೂ ಪೂರ್ತಿಯಾಗಿ ನವವಸಾಹತುಶಾಹಿ ದಾಸ್ಯದಿಂದ ಹೊರಬರದಿರುವುದರ ದ್ಯೋತಕವಾಗಿದೆ. ತ್ರಿಭಾಷಾಸೂತ್ರವೇ ಇಂದಿಗೂ ಭಾಷಾ ನೀತಿಯಾಗಿರುವುದರಿಂದ ಕನ್ನಡದ ಪೂರ್ಣ ಏಳಿಗೆಗೆ ದಾರಿ ಮುಚ್ಚಿಕೊಂಡಿದೆ. ಇನ್ನು ಇಂದಿಗೂ ನೆರೆಯ ರಾಜ್ಯಗಳೊಂದಿಗಿನ ಗಡಿ ವಿವಾದಗಳು ಹಾಗೂ ಜಲವಿವಾದಗಳು ಜ್ವಲಂತವಾಗಿವೆ. ಕೇರಳದೊಂದಿಗೆ ಕಾಸರಗೋಡು, ತಮಿಳುನಾಡಿನೊಂದಿಗೆ ಹೊಗೇನಕಲ್, ಮಹಾರಾಷ್ಟ್ರದೊಂದಿಗೆ ಬೆಳಗಾವಿಗಳ ಕುರಿತ ವಿವಾದಗಳು ಇನ್ನೂ ಪರಿಹರವಾಗದೇ ಹಾಗೆಯೇ ಉಳಿದುಕೊಂಡಿವೆ. ತಮಿಳುನಾಡಿನೊಂದಿಗೆ ಕಾವೇರಿ ಹಾಗೂ ಆಂಧ್ರದೊಂದಿಗಿನ ಕೃಷ್ಣ್ಣಾನದಿ ನೀರಿನ ವಿವಾದಗಳು ಪರಿಹಾರವಾಗದೆ ಮುಂದುವರೆಯುತ್ತಿವೆ.


ವಾಸ್ತವದಲ್ಲಿ ಇಂದು ಆರು ಕೋಟಿ ಕನ್ನಡಿಗರ ಬದುಕನ್ನು ನಿಯಂತ್ರಿಸುತ್ತಿರುವುದು ನಾಲ್ಕುಸಾವಿರದಷ್ಟು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಉತ್ತರಭಾರತದ ಉದ್ದಿಮೆಪತಿಗಳು ಮತ್ತು ಇವರ ಮಧ್ಯವರ್ತಿಗಳಾಗಿರುವ ಕರ್ನಾಟಕದ ಕೆಲವೇ ಮಂದಿ ಉದ್ದಿಮೆಪತಿಗಳೂ, ಅಧಿಕಾರಶಾಹಿಗಳೇ ಆಗಿದ್ದಾರೆ. ಈ ಕಾರಣದಿಂದಾಗಿಯೇ ಜನರಿಂದ ಆರಿಸಲ್ಪಟ್ಟ ಸರ್ಕಾರಗಳು ರಚಿಸುವ ಕಾಯ್ದೆ ಕಾನೂನುಗಳು, ಆರ್ಥಿಕ ನೀತಿ ನಿರೂಪಣೆಗಳು ಈ ಮೇಲಿನ ವರ್ಗಗಳ ಪಕ್ಷಪಾತಿಯಾಗಿರುತ್ತವೆ. ವಿಶೇಷ ಆರ್ಥಿಕ ವಲಯಗಳು ಕನ್ನಡಿಗರ ಲಕ್ಷಾಂತರ ಎಕರೆ ಭೂಮಿಯನ್ನು ಕಬಳಿಸತೊಡಗಿವೆ. ಕೃಷಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಮಧ್ಯಪ್ರವೇಶದೊಂದಿಗೆ ರೈತಾಪಿಯ ಬದುಕು ಹೈರಾಣಾಗಿದೆ. ಕಾರ್ಪೋರೇಟ್ ಕೃಷಿಯೂ ಸಾಮಾನ್ಯ ರೈತರಿಗರ ಮಾರಕವಾಗಿದೆ. ಖಾಸಗೀಕರಣವು ಹಲವು ದೈತ್ಯ ವಿದೇಶೀ ಕಂಪನಿಗಳಿಗೆ ಅಪಾರ ಲಾಭಗಳಿಸಲು ದಾರಿ ಮಾಡಿಕೊಡುತ್ತಾ ಸಾವಿರಾರು ಕಾರ್ಮಿಕರ ಕೆಲಸಗಳನ್ನು ಕಿತ್ತುಕೊಂಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕನ್ನಡ ಪ್ರೇಮವೆನ್ನುವುದು ನವೆಂಬರ್ ಒಂದರಂದು ಆರಂಭವಾಗಿ ನವೆಂಬರ್ 30 ಕ್ಕೆ ಮಗಿದುಬಿಡುತ್ತಿರುವುದನ್ನು ಕಾಣುತ್ತಿದ್ದೇವೆ. ಹಲವು ಸಂದರ್ಭಗಳಲ್ಲಿ ನಮ್ಮದೇ ಪರಿಸ್ಥಿತಿಗಳಲ್ಲಿರುವ ನೆರೆಯ ರಾಜ್ಯದವರನ್ನು, ಪರಭಾಷಿಕರನ್ನು ದ್ವೇಷಿಸುವುದಕ್ಕೇ ನಮ್ಮ ಕನ್ನಡಪ್ರೇಮವು ಕೊನೆಯಗಿಬಿಡುತ್ತದೆ. ಈ ಬಗೆಯ ಕನ್ನಡಾಭಿಮಾನವು ಕರ್ನಾಟಕವನ್ನು, ಕನ್ನಡಿಗರನ್ನು ಮತ್ತು ಕನ್ನಡವನ್ನು ನಿಜವಾದ ಅಭ್ಯುದಯದೆಡೆಗೆ ಖಂಡಿತಾ ಕೊಂಡೊಯ್ಯಲರದು. ಆದ್ದರಿಂದ ಇಂದು ಕನ್ನಡನಾಡಿಗೆ, ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಕಂಟಕಪ್ರಾಯವಾಗಿರುವ ಶಕ್ತಿಗಳನ್ನು ಅರಿತು ಮುನ್ನಡೆಯುವುದು ಇಂದಿನ ತುರ್ತಾಗಿದೆ.

- ಹರ್ಷಕುಮಾರ್ ಕುಗ್ವೆ